Friday, April 9, 2010

ಅವನು...
ನಾನು ಕವಿತೆ ಬರೆಯುತ್ತಿರಲಿಲ್ಲ ... ಆದರೆ ಅವನು ಬರೆಯುತಿದ್ದ.... ಕಣ್ಣಲ್ಲೇ ಚಿತ್ರ ಬಿಡಿಸಿ , ಮನಸಲ್ಲೇ ಕವನ ಗೀಚುತ್ತಿದ್ದ...
ಕಂಡ ಪ್ರತಿ ವಸ್ತುವಿನಲು ಕವಿತೆ ಕಾಣುತ್ತಿದ್ದ.. ಮೂಲೆಯ ಪದಗಳನ್ನು ಹೆಕ್ಕಿ ತಂದು ಕಲ್ಪನೆಯಾಗಿಸುತ್ತಿದ್ದ.. ನನ್ನ ಕನಸುಗಳಾಗಿ ಕಳುಹಿಸುತ್ತಿದ್ದ...
ನನ್ನ ಪ್ರತಿ ಮಾತನ್ನು ಶಬ್ದವಾಗಿಸಿದ..., ಪ್ರತಿ ನಗುವನ್ನು ಕಾಗದದೊಳಗೆ ಕೂಡಿಟ್ಟ...
ನನ್ನನ್ನೇ ಕವನವನ್ನಾಗಿಸಿದ...
ಮೀರದ ಅವನ ಮಾತು, ಮೌನ ನನ್ನನ್ನು ಅವನ ಪಂಜರದೊಳಗೆ ಒಯ್ದಿತ್ತು. ಬಂಧಿಯಾಗಿದ್ದೆ ನಾನು ಅದೃಶ್ಯ ಬಲೆಯೊಳಗೆ..
ಮಾನಸ ಬೇಲಿಯ ಮೀರಿ...
ನನಗೆ ಗೀಚಲು ಕಲಿಸಿದ್ದೂ ಅವನೇ...
ಕಲ್ಪನೆಯ ದಾರಿಯಲಿ ಅವನ ನೆರಳಾಗಿದ್ದೆ...
ಆಗ ಚೈತ್ರದ ಹೂಗಳು ಅರಳಿದ್ದು ನನಗೆ ಕಾಣಿಸಿತು, ನದಿಗಳ ಮೌನಕ್ಕೆ ಕಿವಿ ಸೋತಿತ್ತು, ಹಕ್ಕಿಯ ಮಾತಿಗೆ ತಲೆಯಾಡಿಸಿತ್ತು,
ಆಗಲೇ ಅನಿಸಿದ್ದು ಈ ಬದುಕು ಅದೆಸ್ತು ಸುಂದರ .
ಮೊದಲೆಲ್ಲಾ ನಾ ಬರಿ ಕೊರಡಾಗಿದ್ದೆ....
ನನ್ನನೊಂದು ಕೊಳಲಾಗಿಸಿದ , ಜೀವ ಸೆಲೆಯಾಗಿಸಿದ, ಬದುಕ ಒಲವಾಗಿಸಿದ...
ಬದುಕು ಕಟ್ಟುವ ಹವಣಿಕೆ ಅವನಲ್ಲಿತ್ತು...
ಕವನ ಕಟ್ಟಿದಷ್ಟು ಸುಲಭವಾಗಿರಲಿಲ್ಲ ಅದು...
ಕನಸಲ್ಲಿಯೂ ಮಾತಾಡಿದ , ಕವನಗಳ ಗೀಚಿದ
ಆದರೆ ಬಾಳ ಚಕ್ರ ಕಾಲ ಚಕ್ರದೊಳಗೆ ಸೇರಿತ್ತು..
ಬಳಲಿ ಬೆಂಡಾದ , ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದ...
ಕೊನೆಗೂ, ಅ ರವಿ ಕಾಣದ ಕವಿಯಾದ...
ಈಗಲೂ ಬರೆಯುತ್ತಾನೆ ಕವಿತೆ, ಗೀಚುತ್ತಾನೆ ಕವನ ....
ಮೀರಿ ಅವನ ಪರಿಧಿ ನನ್ನ ಮೂಲಕ..
ಅವನೊಂದು ನೆನಪು..
ನನ್ನ ಕವನಗಳ ಬೆಳಕು.......
ನಾನು ಗೀಚುವುದು ಅವನ ಆಸೆ, ಅವನ ಕನಸು...
ಗೀಚುತ್ತಿದ್ದೆ, ಗೀಚುತ್ತೇನೆ, ಗೀಚುತ್ತಲೇ ಇರುತ್ತೇನೆ ನಿರಂತರವಾಗಿ ....
ಅವನ ನೆನಪಿನೊಂದಿಗೆ...
ಅವನಿಗಾಗಿ....

1 comment: